Dr C P Ravikumar

ಅಡ್ಡಪರಿಣಾಮಗಳು

‘ಅಡ್ಡಪರಿಣಾಮ’ ಎಂಬ ಪದವು ಪ್ರತಿಯೊಬ್ಬ ರೋಗಿ ಅಥವಾ ಪೋಷಕರನ್ನು ಚಿಂತೆಗೀಡು ಮಾಡುತ್ತದೆ. ಅದೂ ಸಹ ಉಂಟಾಗುವ ಮುನ್ನವೇ! ಈ ಕೈಪಿಡಿಯು, ಅಡ್ಡಪರಿಣಾಮ ಎಂಬುದರ ಅರ್ಥವೇನು? ಮತ್ತು ಯಾವುದೇ ಚಿಕಿತ್ಸೆ ಅಥವಾ ತರಬೇತಿಯ ಅಡ್ಡಪರಿಣಾಮಗಳ ಬಗ್ಗೆ ಜಾಗೃತರಾಗಿರುವುದು ಏಕೆ ಮುಖ್ಯ ಎಂಬುದನ್ನು ವಿವರಿಸುವ ಒಂದು ಪ್ರಯತ್ನವಷ್ಟೆ.

ಅಡ್ಡಪರಿಣಾಮ ಎಂದರೇನು?

ಅಡ್ಡಪರಿಣಾಮದ ಅರ್ಥವನ್ನು ಹಲವು ಬಗೆಯಲ್ಲಿ ವ್ಯಾಖ್ಯಾನಿಸಬಹುದಾಗಿದೆ.

ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (ಎನ್ಸಿಐ) ಸಂಸ್ಥೆಯು ಅಡ್ಡಪರಿಣಾಮವನ್ನು “ಔಷಧಿಯನ್ನು ಬಳಸಿ ನೀಡಲಾಗುವ ಚಿಕಿತ್ಸೆ ಅಥವಾ ಇತರ ತರಬೇತಿಯ ಚಿಕಿತ್ಸೆಯ ಸಮಯದಲ್ಲಿ ಉಂಟಾಗುವ ಅನಿರೀಕ್ಷಿತ ವೈದ್ಯಕೀಯ ಸಮಸ್ಯೆ” ಎಂದು ವ್ಯಾಖ್ಯಾನಿಸುತ್ತದೆ.

ಸರಳವಾಗಿ ಹೇಳುವುದಾದರೆ, ಔಷಧ ಅಥವಾ ಚಿಕಿತ್ಸೆಯಿಂದ ಉಂಟಾಗುವ ಅನಗತ್ಯ ಪರಿಣಾಮವೇ ಈ ‘ಅಡ್ಡಪರಿಣಾಮ’.

ಅಡ್ಡಪರಿಣಾಮ ಮತ್ತು ಅಲರ್ಜಿ ಪ್ರತಿಪರಿಣಾಮ ಎರಡು ಒಂದೇಯೇ?

ಇಲ್ಲ, ಇವೆರಡೂ ಪ್ರತ್ಯೇಕವಾದ ಪ್ರತಿಪರಿಣಾಮಗಳು. ಗೊಂದಲಗೊಳ್ಳುವುದು ಬೇಡ.

ಯಾವ ಔಷಧಗಳು / ಚಿಕಿತ್ಸೆಗಳು ಅಡ್ಡಪರಿಣಾಮಗಳಿಗೆ ಕಾರಣವಾಗುತ್ತವೆ?

ಪ್ರತಿಯೊಂದು ಔಷಧಿಯು ಪರಿಣಾಮದೊಂದಿಗೆ ಅಡ್ಡಪರಿಣಾಮದ ಅಪಾಯವನ್ನು ಸಹ ಹೊಂದಿರುತ್ತದೆ! ಅಡ್ಡಪರಿಣಾಮವನ್ನು ಉಂಟು ಮಾಡದಿರುವ ಯಾವುದೇ ಔಷಧಿ ಇಲ್ಲ. ಆದ್ದರಿಂದ, ಅಡ್ಡಪರಿಣಾಮವು ಪರಿಣಾಮದ ಇನ್ನೊಂದು ಮುಖವೆಂದು ಒಪ್ಪಿಕೊಳ್ಳುವುದು ಮುಖ್ಯವಾಗುತ್ತದೆ. ಎಲ್ಲ ಬಗೆಯ ಚಿಕಿತ್ಸಾ ಪ್ರಕಾರಗಳಲ್ಲಿ ಈ ಅಡ್ಡಪರಿಣಾಮವೆಂಬುದು ಇದ್ದೇ ಇರುತ್ತದೆ. ಅದು ಅಲೋಪಥಿಯಾಗಿರಬಹುದು, ಹೊಮಿಯೋಪತಿಯಾಗಿರಬಹುದು ಅಥವಾ ಯಾವುದೇ ಪ್ರಕಾರವಾಗಿರಬಹುದು. ಆ ಔಷಧಿಗಳು ನೀವು ಮೆಡಿಕಲ್ ಸ್ಟೋರ್ ಗಳಲ್ಲಿ ತೆಗೆದುಕೊಂಡದ್ದಾಗಿರಬಹುದು ಅಥವಾ ವೈದ್ಯರು ನೀಡಿದ ಚೀಟಿಯ ಮೂಲಕ ತೆಗೆದುಕೊಂಡ ಔಷಧವಾಗಿರಬಹುದು.

ಹಾಗಾದರೆ, ಅಡ್ಡಪರಿಣಾಮಗಳನ್ನು ಹೊಂದಿರುವ ಔಷಧಿಗಳ ಬಳಕೆಗೆ ಏಕೆ ಅನುಮತಿ ನೀಡಲಾಗಿದೆ?

ಎಲ್ಲಾ ಔಷಧಿಗಳು ಬಳಕೆಗೆ ಅನುಮೋದನೆ ಪಡೆಯುವ ಮೊದಲು ಕಟ್ಟುನಿಟ್ಟಾದ ’ಅನುಮೋದನಾ ಪ್ರಕ್ರಿಯೆ’ಗೆ ಒಳಪಡುತ್ತವೆ. ಆದರೆ, ಅಡ್ಡಪರಿಣಾಮಗಳಿಗೂ ಮೀರಿ ಹೆಚ್ಚಿನ ಪ್ರಯೋಜನಗಳನ್ನು ಹೊಂದಿರುವ ಔಷಧಿಗಳಿಗೆ ಮಾತ್ರ ಅನುಮೋದನೆ ನೀಡಲಾಗುತ್ತದೆ.

ನಿಮಗಿದು ತಿಳಿದಿರಲಿ, ಪರಿಣಾಮ ಮತ್ತು ಅಡ್ಡಪರಿಣಾಮವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ!

ಈ ಅಡ್ಡಪರಿಣಾಮದ ಬಗ್ಗೆ ಉದಾಹರಣೆಯೊಂದನ್ನು ತಿಳಿಸುವಿರಾ?

ಅಡ್ಡಪರಿಣಾಮವು ಸಣ್ಣ ಪ್ರಮಾಣದಿಂದ ಹಿಡಿದು ತೀವ್ರ ಪ್ರಮಾಣದವರೆಗೂ ಉಂಟಾಗಬಹುದು. ಉದಾಹರಣೆಗೆ, ಪ್ರತಿಜೀವಕ (ಆಂಟಿಬಯೋಟಿಕ್)ಗಳು, ಗ್ಯಾಸ್ಟ್ರಿಕ್ಸ್ ಮತ್ತು ಅತಿಸಾರದಂತಹ ಅಡ್ಡಪರಿಣಾಮಕ್ಕೆ ಕಾರಣವಾಗಬಲ್ಲವು. ಆದರೆ, ಇಲ್ಲಿ ಈ ಪ್ರತಿಜೀವಕಗಳಿಂದ ಉಂಟಾಗುವ ಅಡ್ಡಪರಿಣಾಮಗಳಿಗಿಂತ ಅವುಗಳಿಂದುಂಟಾಗುವ ಪ್ರಯೋಜನ ಹೆಚ್ಚು. ಆದ್ದರಿಂದ, ಈ ಔಷಧಿಗಳ ಬಳಕೆಗೆ ಅನುಮತಿ ನೀಡಲಾಗಿದೆ. ಸಾಮಾನ್ಯವಾಗಿ ಬಳಕೆದಾರರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಪ್ರತಿಜೀವಕಗಳಿಂದ ಉಂಟಾಗುವ ಗಂಭೀರ ಅಡ್ಡಪರಿಣಾಮಗಳೆಂದರೆ, ಹೃದಯ ಬಡಿತದ ಮೇಲೆ ವ್ಯತಿರಿಕ್ತ ಪರಿಣಾಮ, ರಕ್ತ ಕಣಗಳ ಉತ್ಪಾದನೆಯನ್ನು ನಿಗ್ರಹಿಸುವುದು. ಇದು ತೀವ್ರ ಮತ್ತು ಅಸಾಮಾನ್ಯವಾಗಿರುತ್ತದೆ.

ಪ್ರತಿಯೊಂದು ಔಷಧಿಯು ಕೆಲವು ಸಾಮಾನ್ಯ ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತವೆ. ಆದರೆ, ಹಲವಾರು ಬಾರಿ ನಮಗೆ ತಿಳಿದಿರದ ಇತರೆ ಅಡ್ಡ ಪರಿಣಾಮಗಳನ್ನು ಸಹ ಉಂಟು ಮಾಡುತ್ತವೆ. ಹಾಗಾಗಿ, ನೀವು ತೆಗೆದುಕೊಳ್ಳುವ ನಿರ್ದಿಷ್ಟ ಔಷಧದಿಂದ ಉಂಟಾಗಬಹುದಾದ ಅಡ್ಡಪರಿಣಾಮದ ಬಗ್ಗೆ ತಿಳಿದುಕೊಂಡು ಮುಂದುವರಿಯುವುದು ಉತ್ತಮ.

ನನಗೆ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ?

ಪ್ರತಿಯೊಬ್ಬರು ತೆಗೆದುಕೊಳ್ಳುವ ಪ್ರತಿ ಔಷಧಿಯು ಅಡ್ಡಪರಿಣಾಮಗಳು ಮತ್ತು ಪ್ರಯೋಜನಕಾರಿ ಅಂಶಗಳೆರಡನ್ನೂ ಹೊಂದಿರುತ್ತದೆ. ಹಾಗಾಗಿ, ನಾವೆಲ್ಲಾ ಸಂಭಾವ್ಯ ಅಪಾಯದ ಸಾಧ್ಯತೆಯಲ್ಲೇ ಇರುತ್ತೇವೆ. ಆದರೆ, ನಮ್ಮ ವಂಶವಾಹಿನಿಗಳು ನಮಗೆ ಔಷಧದಿಂದ ಅಡ್ಡಪರಿಣಾಮ ಉಂಟಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ, ಆರೋಗ್ಯ ಮತ್ತು ಅದಕ್ಕೆ ಸಂಬಂಧಿಸಿದ ಇತರ ಅಂಶಗಳು ಒಬ್ಬರಿಂದ ಒಬ್ಬರಿಗೆ ವಿಭಿನ್ನ ಹಾಗೂ ವಿಶೇಷವಾಗಿರುತ್ತವೆ.

ನಮಗೆ ಅಡ್ಡಪರಿಣಾಮ ಉಂಟಾಗುವ ಮೊದಲೇ ಅವುಗಳನ್ನು ತಿಳಿದುಕೊಳ್ಳಬಹುದೇ?

ನಿಯಮಗಳ ಪ್ರಕಾರ, ಅಡ್ಡಪರಿಣಾಮವು ಉಂಟಾಗುವ ಮೊದಲು ಅದನ್ನು ಪರೀಕ್ಷೆ ಅಥವಾ ಇತರೆ ವಿಧಾನಗಳ ಮೂಲಕ ತಿಳಿಯುವ ಮಾರ್ಗವಿಲ್ಲ. ಆದರೆ, ಫಾರ್ಮಾಕೊಜೆನೊಮಿಕ್ಸ್ ಎಂಬುದು ವೇಗವಾಗಿ ಬೆಳೆಯುತ್ತಿರುವ ಔಷಧ ಕ್ಷೇತ್ರವಾಗಿದ್ದು, ಇದು ನಿರ್ದಿಷ್ಟ ಔಷಧಿಗಳಿಂದ ಯಾರಿಗೆ ಅಪಾಯದ ಸಾಧ್ಯತೆ ಇರುತ್ತದೆ ಮತ್ತು ಯಾರಲ್ಲಿ ಹೆಚ್ಚಿರುತ್ತದೆ ಎಂಬುದನ್ನು ಗುರುತಿಸಲು ಸಹಾಯ ಮಾಡುತ್ತದೆ.

ನಮ್ಮಲ್ಲಿರುವ ಕೆಲವು ಔಷಧಿಗಳು ಬಹಳ ಪರಿಣಾಮಕಾರಿಯಾಗಿವೆ. ಆದರೆ, ಗಂಭೀರವಾದ ಅಡ್ಡಪರಿಣಾಮವನ್ನು ಹೊಂದಿದ್ದು, ಕೆಲವು ನಿರ್ದಿಷ್ಟ ವಂಶವಾಹಿ ಹೊಂದಿರುವ ವ್ಯಕ್ತಿಗಳಲ್ಲಿ ಅದರ ಅಪಾಯದ ಸಾಧ್ಯತೆ ಹೆಚ್ಚು ಎಂಬುದು ನಮಗೆ ಈಗ ತಿಳಿದು ಬಂದಿದೆ.

ಆದ್ದರಿಂದ, ವಂಶವಾಹಿ ಪರೀಕ್ಷೆಯು ಕೆಲವು ಔಷಧಿಗಳಿಂದ ಯಾರಲ್ಲಿ ಅಡ್ಡಪರಿಣಾಮ ಉಂಟಾಗಬಹುದೆಂಬುದನ್ನು ತಿಳಿದುಕೊಳ್ಳಲು ಒಂದು ಆಯ್ಕೆಯಾಗಿದೆ.

ಉದಾಹರಣೆಗೆ: * ಎಚ್‌ಎಲ್‌ಎ ಬಿ 1502 * ವಂಶವಾಹಿ ಹೊಂದಿರುವವರಿಗೆ ಕಾರ್ಬಮಾಜೆಪೈನ್ ಔಷಧಿ ಸೇವನೆಯು ಮಾರಣಾಂತಿಕ ಅಡ್ಡಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಈ ಔಷಧಿಗಳನ್ನು ಬಳಸಲು ಸಲಹೆ ನೀಡುವ ಮೊದಲು ನಾವು ಅದನ್ನು ಪರೀಕ್ಷಿಸಬಹುದು.

ಮೊದಲ ಡೋಸ್ (ಔಷಧದ ಪ್ರಮಾಣ) ತೆಗೆದುಕೊಂಡ ನಂತರ ಅಡ್ಡಪರಿಣಾಮ ಉಂಟಾಗುತ್ತದೆಯೇ?

ಇದನ್ನು ಊಹಿಸಲು ಸಾಧ್ಯವಿಲ್ಲ. ಏಕೆಂದರೆ, ಸಾಮಾನ್ಯವಾಗಿ, ಔಷಧಿ ತೆಗೆದುಕೊಂಡ ನಂತರ ಅಡ್ಡಪರಿಣಾಮಗಳು ಕಾಣಿಸಿಕೊಳ್ಳಲು ಕೆಲವು ದಿನಗಳು ಬೇಕಾಗುತ್ತವೆ. ಅಲರ್ಜಿಯು ಔಷಧಿಯ ಮೊದಲ ಬಳಕೆಯ ನಂತರ ಉಂಟಾಗಬಹುದು. ಕೆಲವೊಮ್ಮೆ, ಹೆಚ್ಚಿನ ಪ್ರಮಾಣದಲ್ಲಿ ಔಷಧಿಯನ್ನು ತೆಗೆದುಕೊಂಡಾಗ ಮಾತ್ರ ಅಡ್ಡಪರಿಣಾಮಗಳು ಉಂಟಾಗಬಹುದು.

ನಾನು ನಿರ್ದಿಷ್ಟ ಔಷಧಿಯೊಂದನ್ನು ತೆಗೆದುಕೊಳ್ಳುತ್ತಿದ್ದೇನೆ. ನನಗೆ ಇದುವರೆಗೆ ಯಾವುದೇ ಅಡ್ಡಪರಿಣಾಮ ಉಂಟಾಗಿಲ್ಲ. ಅಂದರೆ, ನಾನು ಈ ಔಷಧಿ ಬಳಸುವುದರಿಂದ ಎಂದಿಗೂ ಅಡ್ಡಪರಿಣಾಮ ಉಂಟಾಗುವುದಿಲ್ಲವೇ?

ಬಹುಶಃ ನೀವು ಬಳಸುತ್ತಿರುವ ಔಷಧಿಯಿಂದ ನಿಮಗೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗದಿರಬಹುದು. ಆದರೆ, ಹಾಗೆಂದ ಮಾತ್ರಕ್ಕೆ ನೀವು ಎಚ್ಚರಿಕೆ ಮಾತನ್ನು ಗಾಳಿಗೆ ತೂರಿಬಿಡಬೇಕಿಲ್ಲ. ಏಕೆಂದರೆ, ಔಷಧಿಗಳ ದೀರ್ಘಾವಧಿಯ ಬಳಕೆಯಿಂದಾಗಿ ಅಥವಾ, ದಿನಕಳೆದಂತೆ ಅದರ ತೆಗೆದುಕೊಳ್ಳುವ ಪ್ರಮಾಣ ಹೆಚ್ಚಾದಾಗ, ಇತರ ಔಷಧಿಗಳು ಅಥವಾ ಇತರ ಆರೋಗ್ಯ ಸಮಸ್ಯೆಗಳಿಂದಾಗಿ ಅಡ್ಡಪರಿಣಾಮ ಉಂಟಾಗುವ ಅಪಾಯದ ಸಾಧ್ಯತೆಯಿರುತ್ತದೆ.

ಇದು ವಾಹನವನ್ನು ಚಲಾಯಿಸಿದಂತೆ. ನೀವು ಯಾವಾಗಲೂ ಸಾಂದರ್ಭಿಕ ಅರಿವು ಹೊಂದಿರಬೇಕಾಗುತ್ತದೆ. ಆದರೆ, ಅದರರ್ಥ ನೀವು ನಿಮ್ಮ ಇಡೀ ಪ್ರಯಾಣದುದ್ದಕ್ಕೂ ಅಪಘಾತದಲ್ಲಿ ಸಿಲುಕುವ ಚಿಂತೆ ಮಾಡುತ್ತಿರಿ ಎಂದಲ್ಲ.

ಜೆನೆರಿಕ್ ಔಷಧಿಗಳಲ್ಲಿ (ಸಾಮಾನ್ಯ ಔಷಧಿಗಳು) ಅಡ್ಡಪರಿಣಾಮ ಉಂಟು ಮಾಡುವ ಸಾಧ್ಯತೆ ಹೆಚ್ಚು ಇದೆಯೇ?

ಈ ಜೆನೆರಿಕ್ ಔಷಧಿಗಳು ಬ್ರಾಂಡೆಂಡ್ (ಮೂಲ ಔಷಧಿಗಳು) ಔಷಧಿಗಳ ಪ್ರತಿಗಳು. ಅವು ಸಹ ಮೂಲ ಔಷಧಿಗಳಂತೆ ನಿಖರವಾದ ಪರಿಣಾಮ ಮತ್ತು ಅಡ್ಡಪರಿಣಾಮ ಬೀರುತ್ತವೆ ಎಂದು ನಿರೀಕ್ಷಿಸಲಾಗಿದೆ.

ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಯನ್ನು ನಾನು ಎಲ್ಲಿ ಪಡೆಯಬಹುದು?

ಪ್ರತಿ ಔಷಧಿಯೊಂದಿಗೆ ನೀಡಲಾಗುವ ರೋಗಿಗಳ ಮಾಹಿತಿ ಕರಪತ್ರವನ್ನು ದಯವಿಟ್ಟು ಓದಿ ಅಥವಾ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಂದೇಹ ಬಗೆಹರಿಸಿಕೊಳ್ಳಬಹುದು.

ಸಾಮಾನ್ಯ ಅಡ್ಡಪರಿಣಾಮ ಅಥವಾ ಅಪರೂಪದ ಪರಿಣಾಮವೆಂದರೇನು?

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳು, ಜನರು ಮತ್ತು ಆರೋಗ್ಯ ವೃತ್ತಿಪರರಿಗೆ ಅನುಕೂಲವಾಗುವಂತೆ ಒಂದೇ ಬಗೆಯ ಸರಳ ಪರಿಭಾಷೆಗಳನ್ನು ಬಳಸುತ್ತವೆ. ಅಡ್ಡಪರಿಣಾಮವನ್ನು ತುಂಬಾ ಸಾಮಾನ್ಯವೆಂದು ಪರಿಗಣಿಸಿದರೆ, ಔಷಧಿ ತೆಗೆದುಕೊಳ್ಳುವ ಪ್ರತಿ 10 ರೋಗಿಗಳಲ್ಲಿ, ಒಬ್ಬರು ಅಥವಾ ಅದಕ್ಕಿಂತ ಹೆಚ್ಚಿನವರು ಅಡ್ಡಪರಿಣಾಮಕ್ಕೆ ಒಳಗಾಗುತ್ತಾರೆ ಎಂಬುದು ತಿಳಿದು ಬರುತ್ತದೆ.

ತುಂಬಾ ಸಾಮಾನ್ಯ: ಪ್ರತಿ 10 ಜನರಲ್ಲಿ ಒಬ್ಬರು

ಸಾಮಾನ್ಯ (ಆಗಾಗ್ಗೆ): ಪ್ರತಿ 1 ಜನರಲ್ಲಿ ಒಬ್ಬರು

ಅಸಾಮಾನ್ಯ (ವಿರಳ): ಪ್ರತಿ 1000 ಜನರಲ್ಲಿ ಒಬ್ಬರು

ಅಪರೂಪ: ಪ್ರತಿ 1000ಜನರಲ್ಲಿ ಒಬ್ಬರು

ಬಹಳ ಅಪರೂಪ: ಪ್ರತಿ 10000 ಜನರಲ್ಲಿ ಒಬ್ಬರಿಗಿಂತ ಕಡಿಮೆ

ಆದರೆ, ಇದನ್ನು ಮತ್ತೊಂದು ದೃಷ್ಟಿಕೋನದಿಂದ ನೋಡುವುದಾದರೆ, ಬೆಂಗಳೂರು ಸಂಚಾರ ಪೊಲೀಸ್ ಅಂಕಿಅಂಶಗಳ ಪ್ರಕಾರ, 2019ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ 4688 ಅಪಘಾತಗಳು ದಾಖಲಾಗಿವೆ. ಅಂದರೆ, ಔಷಧಿಗಳ ಅಡ್ಡಪರಿಣಾಮಗಳಿಗಿಂತ ಅಪಘಾತದಲ್ಲಿ ಸಿಲುಕುವವರ ಸಂಖ್ಯೆಯೇ ಹೆಚ್ಚು.

ನಾನು ತೆಗೆದುಕೊಳ್ಳುವ ಇತರ ಔಷಧಿಗಳು ಅಡ್ಡಪರಿಣಾಮದ ಸಾಧ್ಯತೆಯನ್ನು ಹೆಚ್ಚಿಸುತ್ತವೆಯೇ?

– ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ದಯವಿಟ್ಟು ನಿಮ್ಮ ವೈದ್ಯರೊಂದಿಗೆ ಸಂಭಾವ್ಯ ಅಪಾಯದ ಬಗ್ಗೆ ಚರ್ಚಿಸಿ.

ಪ್ರತಿಕೂಲ ಔಷಧ ಪ್ರತಿಕ್ರಿಯೆ (ಎಡಿಆರ್)/ ಪ್ರತಿಪರಿಣಾಮ ಎಂದರೇನು?

ಔಷಧಿಯನ್ನು ಸೇವಿಸಿದ ನಂತರ ಉಂಟಾಗುವ ಅನಗತ್ಯ ಅಥವಾ ಹಾನಿಕಾರಕ ಪ್ರತಿಕ್ರಿಯೆಯನ್ನು ‘ಪ್ರತಿಕೂಲ ಔಷಧ/ ಪ್ರತಿಪರಿಣಾಮ’ (ಎಡಿಆರ್) ಎನ್ನಬಹುದು. ಇದು ಔಷಧಿಗೆ ಸಂಬಂಧಿಸಿದ್ದು ಎಂಬುದು ಸಂದೇಹಾಸ್ಪದ. ಈ ರೀತಿ ಔಷಧದಿಂದ ಪ್ರತಿಪರಿಣಾಮ ಉಂಟಾದಾಗ ಸಾಮಾನ್ಯವಾಗಿ ಆ ಔಷಧಿಯನ್ನು ನೀಡುವುದನ್ನು ನಿಲ್ಲಿಸುವುದು ಅಥವಾ ಅದರ ಪ್ರಮಾಣವನ್ನು ಕಡಿಮೆ ಮಾಡುವುದು ಅತ್ಯಗತ್ಯ.

ಉದ್ದೇಶಿತ ಚಿಕಿತ್ಸಾ ಪರಿಣಾಮವನ್ನು ಹೊರತುಪಡಿಸಿ ಔಷಧದಿಂದ ಉಂಟಾಗುವ ಯಾವುದೇ ಪರಿಣಾಮ ಅಡ್ಡಪರಿಣಾಮವೆನ್ನಬಹುದು. ಅಂದರೆ, ಅದು ಪ್ರಯೋಜನಕಾರಿಯಾಗಿರಬಹುದು, ತಟಸ್ಥವಾಗಿರಬಹುದು ಅಥವಾ ಹಾನಿಕಾರಕವೂ ಆಗಿರಬಹುದು.

ಔಷಧಿಗಳು ಪರಸ್ಪರ ಬೆರೆಯುವುದು ಎಂದರೇನು?

ನೀವು ಅನೇಕ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ, ಒಂದು ಔಷಧದ ಅಂಶವು ಮತ್ತೊಂದು ಔಷಧಿಯೊಂದರ ಅಂಶಗಳೊಂದಿಗೆ ಬೆರೆಯಬಹುದು, ಆಹಾರ ಮತ್ತು ನಿಮ್ಮ ಆರೋಗ್ಯದಿಂದ ಔಷಧದ ಪರಿಣಾಮವನ್ನು ಮಾರ್ಪಡಿಸಬಹುದು. ಇದು ತುಂಬಾ ಸಂಕೀರ್ಣ ವಿಷಯ. ಹಾಗಾಗಿ, ಅದನ್ನು ಕೆಲವು ಉದಾಹರಣೆಗಳ ಮೂಲಕ ತಿಳಿಯೋಣ.

  • ಕೆಮ್ಮಿನ ಸಿರಪ್ ಬೆನಾಡ್ರಿಲ್ ವ್ಯಕ್ತಿಯ ಉದ್ವೇಗವನ್ನು ಕಡಿಮೆಗೊಳಿಸಿ, ಮನಸ್ಸನ್ನು ಸ್ಥಿಮಿತಕ್ಕೆ ತರುವ ಗುಣವನ್ನು ಹೊಂದಿದೆ. ನೀವು ಕ್ಲೋಬಜಮ್ (ಸೆಳೆತವನ್ನು ನಿಲ್ಲಿಸುವ ಔಷಧಿ)ಅನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಪರಿಣಾಮವನ್ನು ಮತ್ತಷ್ಟು ಹೆಚ್ಚಿಸಬಹುದು.
  • ಚಹಾ ಸೇವನೆಯು ದೇಹವು ಕಬ್ಬಿಣಾಂಶವನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ, ಆದರೆ ವಿಟ್‌ಮಿನ್ ’ಸಿ’ ಅನ್ನು ಸಮೃದ್ಧವಾಗಿ ಉಳ್ಳ ಆಹಾರವು ಕಬ್ಬಿಣಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
  • ಸಾಮಾನ್ಯವಾಗಿ ಕಟ್ಟಿದ ಮೂಗಿಗೆ ಡಿಕೊಂಗಸ್ಟೆಂಟ್ ಔಷಧವನ್ನು ಸೂಚಿಸಲಾಗುತ್ತದೆ. ಈ ಔಷಧಗಳು ಫೆನಿಲೆಫ್ರಿನ್ ಅಂಶವನ್ನು ಹೊಂದಿರುತ್ತವೆ. ಇದು ಈಗಾಗಲೇ ಹೆಚ್ಚಿನ ರಕ್ತದೊತ್ತಡ ಇರುವವರ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ ಅಥವಾ ಹೆಚ್ಚಿಸುತ್ತದೆ.

ಇದನ್ನು ಓದಿದ ನಂತರ, ಯಾವುದೇ ಔಷಧಿ ತೆಗೆದುಕೊಳ್ಳಲು ನನಗೆ ಹೆದರಿಕೆಯಾಗುತ್ತದೆ!

ವಾಸ್ತವವೇನೆಂದರೆ, ಔಷಧಿಗಳನ್ನು ಬಳಸಲು ಪ್ರಾರಂಭಿಸಿದಾಗಿನಿಂದಲೂ ಈ ಜಗತ್ತಿನಲ್ಲಿ ಇವುಗಳ ಅಡ್ಡಪರಿಣಾಮಗಳು / ಪರಸ್ಪರ ಕ್ರಿಯೆ / ಪ್ರತಿಕೂಲ ಪ್ರತಿಕ್ರಿಯೆಗಳು ಕೂಡ ಅಸ್ತಿತ್ವದಲ್ಲಿವೆ. ಪ್ರಸ್ತುತ ಪೀಳಿಗೆಗೆ ವೈವಿಧ್ಯಮಯ ಮೂಲಗಳಿಂದ ಮಾಹಿತಿ ತಿಳಿದುಕೊಳ್ಳಲು ಅವಕಾಶವಿದೆ. ಆದರೆ, ಅದು ಯಾವಾಗಲೂ ನಮಗೆ ಧೈರ್ಯ ನೀಡುವುದಿಲ್ಲ. ಆದ್ದರಿಂದ, ಇಲ್ಲಿ ಮಾಹಿತಿಯನ್ನು ಸರಳಗೊಳಿಸುವ ಪ್ರಯತ್ನವನ್ನು ಮಾಡಲಾಗಿದೆ.

ವಿಚಿತ್ರವೆಂದರೆ, ಪ್ರಸ್ತುತ ಪೀಳಿಗೆಯು ಎಲ್ಲವನ್ನೂ ತಿಳಿದುಕೊಳ್ಳಲು ಮತ್ತು ಅದರ ಬಗ್ಗೆ ಚಿಂತಿಸಲು ಬಯಸುತ್ತದೆ!

ಚಿಂತೆಯೆಂಬುದು ತೂಗಾಡುವ ಕುರ್ಚಿಯಿದ್ದಂತೆ: ಅದು ನಿಮಗೆ ಏನಾದರೊಂದು ಭಾವವನ್ನು ನೀಡುತ್ತದೆ. ಆದರೆ, ನಿಮ್ಮನ್ನೆಲ್ಲಿಗೂ ಕೊಂಡೊಯ್ಯುವುದಿಲ್ಲ.

ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ, ನಿಮ್ಮ ವೈದ್ಯರೊಂದಿಗೆ ಮಾತನಾಡಿ, ಸಂಬಂಧಿಸಿದ್ದನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ನಿಶ್ಚಿಂತ ಜೀವನವನ್ನು ಮುಂದುವರಿಸಿ.

ಮುನ್ಸೂಚನೆಯಿದ್ದಾಗ, ಮುಂಚಿತವಾಗಿ ಸಿದ್ಧರಾಗಿರಿ!

Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore