Dr C P Ravikumar

ಲೈವಿಟಾರೆಸಿಟಮ್

ಪೋಷಕರ ಅಥವಾ ರೋಗಿಯ ಮಾಹಿತಿ ಕೈಪಿಡಿ 

 

ಡಾ ಸಿ ಪಿ ರವಿ ಕುಮಾರ್

ಸಲಹೆಗಾರ – ಪೀಡಿಯಾಟ್ರಿಕ್ ನ್ಯೂರಾಲಜಿ
MRCPCH, ಪೀಡಿಯಾಟ್ರಿಕ್ಸ್‌ನಲ್ಲಿ CCT (U.K.)
ಪೀಡಿಯಾಟ್ರಿಕ್ ಎಪಿಲೆಪ್ಸಿಯಲ್ಲಿ ಫೆಲೋ & ನರವಿಜ್ಞಾನ (ಲಂಡನ್)

 

ಬ್ರ್ಯಾಂಡ್ ಹೆಸರುಗಳು: ಲೆವಿಪಿಲ್, ಲೆವಿಸಿಟಾಮ್ಸಿ
ರಪ್:ಎಪಿತ್ರಾ, ಲೆವಿಪಿಲ್, ಲೆವೆರಾ

“ಜೆನೆರಿಕ್ Vs ಬ್ರ್ಯಾಂಡೆಡ್ ಔಷಧಿಗಳು”

ಲೈವಿಟಾರೆಸಿಟಮ್ ಎಂಬುದು ಅಪಸ್ಮಾರ (ಎಪಿಲೆಪ್ಸಿ)ಕ್ಕೆ ಚಿಕಿತ್ಸೆ ನೀಡಲು ಬಳಸುವ ಒಂದು ಔಷಧ.

ನನ್ನ ಮಗು ಔಷಧಿ ತೆಗೆದುಕೊಳ್ಳುವುದು ಏಕೆ ಮುಖ್ಯ?

ನಿಮ್ಮ ಮಗುವಿಗೆ ಫಿಟ್ಸ್ ಬರುವುದನ್ನು ಕಡಿಮೆ ಮಾಡಲು ಅಥವಾ ಸಂಪೂರ್ಣವಾಗಿ ಫಿಟ್ಸ್ ನಿಲ್ಲುವಂತೆ ಮಾಡಲು ನಿಯಮಿತವಾಗಿ ಅಥವಾ ಕ್ರಮಬದ್ಧವಾಗಿ ಲೈವಿಟಾರೆಸಿಟಮ್ ತೆಗೆದುಕೊಳ್ಳುವುದು ತುಂಬಾ ಮುಖ್ಯ

ಲೈವಿಟಾರೆಸಿಟಮ್ ನೀಡುವುದನ್ನು ದಿಢೀರನೇ ನಿಲ್ಲಿಸಬೇಡಿ, ಇದರಿಂದ ನಿಮ್ಮ ಮಗು ಇನ್ನೂ ಹೆಚ್ಚಿನ ಫಿಟ್ಸ್ ಗೆ ಒಳಗಾಗಬಹುದು.

ಲೈವಿಟಾರೆಸಿಟಮ್ ಯಾವ ರೂಪದಲ್ಲಿ ಲಭ್ಯವಿದೆ?

ದ್ರವರೂಪ ,ಮಾತ್ರೆ,ಹಾಗೂ ಚುಚ್ಚುಮದ್ದಿನ(ಇಂಜೆಕ್ಷನ್) ರೂಪದಲ್ಲಿ ಲಭ್ಯವಿದೆ.

ಲೈವಿಟಾರೆಸಿಟಮ್ ಅನ್ನು ಯಾವಾಗ ನೀಡಬೇಕು?

ದಿನಕ್ಕೆ ಎರಡು ಬಾರಿ. ಬೆಳಗ್ಗೆ ಮತ್ತು ಸಂಜೆ ನೀಡಬಹುದು. ಆದರೆ, ಕನಿಷ್ಟ 10-12 ಗಂಟೆಗಳ ಅಂತರವಿರಲಿ.

ಉದಾಹರಣೆಗೆ, ಬೆಳಗ್ಗೆ 7 ರಿಂದ 8 ಗಂಟೆಯ ನಡುವೆ ಅಥವಾ ಸಂಜೆ 7 ರಿಂದ 8 ಗಂಟೆ ನಡುವಿನ ಸಮಯದಲ್ಲಿ ನೀಡಬಹುದು. ಕೆಲವೊಮ್ಮೆ ವೈದ್ಯರು ದಿನಕ್ಕೆ ಮೂರು ಬಾರಿ ಔಷಧಿ ನೀಡುವಂತೆ ಸೂಚಿಸಬಹುದು. ಅಂತಹ ಸಂದರ್ಭದಲ್ಲಿ ದಯವಿಟ್ಟು ನಿಮ್ಮ ವೈದ್ಯರ ಸಲಹೆಯನ್ನ ಅನುಸರಿಸಿ.

ಪ್ರತಿದಿನ ನಿಗದಿತ ಸಮಯಕ್ಕೆ ಔಷಧಿ ನೀಡಬೇಕು. ಇದರಿಂದ ಔಷಧಿ ಕೊಡುವುದು ರೂಢಿಯಾಗಿ ಮರೆತು ಹೋಗುವ ಸಂಭವಗಳು ಕಡಿಮೆಯಾಗುತ್ತವೆ.

ಔಷಧಿ ಕೊಡುವುದನ್ನುಮರೆತರೆ ಏನು ಮಾಡಬೇಕು?

ಒಂದು ವೇಳೆ ನಿಮಗೆ ಆರು ಗಂಟೆಗಳ ಒಳಗಾಗಿ ನೆನಪಾದರೆ ನಿಮ್ಮ ಮಗುವಿಗೆ ತಪ್ಪಿ ಹೋದ ಡೋಸ್ ನೀಡಿ. ಆರು ಗಂಟೆಗಳ ನಂತರ ನೆನಪಾದರೆ ತಪ್ಪಿಹೋದ ಡೋಸ್ ನೀಡಬೇಡಿ. ನಿಯಮಿತವಾಗಿ ನಿಗದಿತ ಡೋಸ್ ನೀಡುವ ಸಮಯದವರೆಗೂ ಕಾಯಿರಿ.

ಯಾವುದೇ ಕಾರಣಕ್ಕೂ ಎರಡು ಡೋಸ್ ಲೈವಿಟಾರೆಸಿಟಮ್ ನೀಡಬೇಡಿ.

ಔಷಧಿಯ ಒಂದು ಡೋಸ್ ತೆಗೆದುಕೊಂಡ 30 ನಿಮಿಷಗಳ ಒಳಗೆ ನಿಮ್ಮ ಮಗು ವಾಂತಿ ಮಾಡಿಕೊಂಡರೆ ಮತ್ತೆ ಇನ್ನೊಂದು ಡೋಸ್ ನೀಡಿ; ಒಂದು ವೇಳೆ ಮಗು ಎರಡನೇ ಡೋಸ್ ತೆಗೆದುಕೊಂಡ ೩೦ ನಿಮಿಷಗಳ ನಂತರ ವಾಂತಿ ಮಾಡಿಕೊಂಡರೆ ಮತ್ತೊಮ್ಮೆ ಅದನ್ನು ನೀಡುವುದು ಬೇಡ.

ಔಷಧಿಯ ಪ್ರಮಾಣ ಎಷ್ಟಿರಬೇಕು?

ನಿಮ್ಮ ಮಗುವಿಗೆ ಎಷ್ಟು ಪ್ರಮಾಣದಲ್ಲಿ ಲೈವಿಟಾರೆಸಿಟಮ್ ನೀಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ನೀಡಬೇಕಾದ ಔಷಧಿಯ ಪ್ರಮಾಣವನ್ನು ಸಾಮಾನ್ಯವಾಗಿ ಔಷಧಿ ಚೀಟಿಯಲ್ಲಿ ಬರೆದಿರಲಾಗುತ್ತದೆ.

ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಲೈವಿಟಾರೆಸಿಟಮ್ ನೀಡಿ. ಕೆಲವು ದಿನಗಳು ಅಥವಾ ವಾರಗಳ ನಂತರ ಔಷಧಿಯ ಪ್ರಮಾಣವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ. ಇದಕ್ಕೆ ನಿಮ್ಮ ವೈದ್ಯರ ಸಲಹೆಯನ್ನು ಪಾಲಿಸಿ. ಇದರಿಂದ ನಿಮ್ಮ ಮಗು ಔಷಧಿಗೆ ಹೊಂದಿಕೊಳ್ಳುತ್ತದೆ. ನಂತರ ಏನು ಮಾಡಬೇಕೆಂಬುದನ್ನು ನಿಮ್ಮ ವೈದ್ಯರು ವಿವರಿಸುತ್ತಾರೆ.

ಎಷ್ಟು ಔಷಧಿ ಕೊಡಬೇಕೆಂದು ನಿಮ್ಮ ವೈದ್ಯರು ಸೂಚಿಸುತ್ತಾರೋ ಅದನ್ನು ಪಾಲಿಸುವುದು ಮುಖ್ಯ

ನಿಮ್ಮ ಮಗು ಫಿಟ್ಸ್ ನಿಂದ ಮುಕ್ತವಾದರೆ ಅಥವಾ ಯಾವುದೇ ಅಡ್ಡಪರಿಣಾಮಗಳು ಇಲ್ಲವೆಂದರೆ ಔಷಧಿಯ ಪ್ರಮಾಣ ಸರಿಯಾಗಿದೆ ಎಂದರ್ಥ.

ಔಷಧಿಯನ್ನು ಹೇಗೆ ನೀಡಬೇಕು? ? ಔಷಧಿಗಳನ್ನು ನೀಡುವುದು”

ಮಾತ್ರೆಗಳು: ಇದನ್ನು ಒಂದು ಲೋಟ ನೀರು, ಜ್ಯೂಸ್ ಅಥವಾ ಹಾಲಿನೊಂದಿಗೆ ನುಂಗಬೇಕು. ಅಥವಾ ಇವುಗಳನ್ನು ಪುಡಿಮಾಡಿ ನೀರು ಅಥವಾ ರಸ ಅಥವಾ ಸಣ್ಣ ಪ್ರಮಾಣದ ಮೊಸರಿನೊಂದಿಗೆ ಸೇವಿಸಬಹುದು.

ದ್ರವ ಅಥವಾ ಸಿರಪ್: ಓರಲ್ ಸಿರಿಂಜ್ ಅಥವಾ ಔಷಧಿ ಚಮಚದಿಂದ ಸರಿಯಾದ ಪ್ರಮಾಣದ ಔಷಧಿಯನ್ನು ಅಳತೆ ಮಾಡಿಕೊಳ್ಳಿ. ಇದನ್ನು ಔಷಧಿ ಅಂಗಡಿಗಳಲ್ಲಿ ಖರೀದಿಸಬಹುದು. ಅಡುಗೆಮನೆಯಲ್ಲಿ ಬಳಸುವ ಟೀ ಚಮಚವನ್ನುಬಳಸಬೇಡಿ. ಇದರಿಂದ ಸರಿಯಾದ ಅಳತೆ ಸಿಗುವುದಿಲ್ಲ.

ಇದರಿಂದ ಏನಾದರೂ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆಯೇ? “ಅಡ್ಡಪರಿಣಾಮಗಳು”

ನಮ್ಮ ಮಕ್ಕಳ ಆರೋಗ್ಯ ಉತ್ತಮಪಡಿಸಲು ನಾವು ಔಷಧಿಗಳನ್ನುಬಳಸುತ್ತೇವೆ. ಆದರೆ, ಕೆಲವೊಮ್ಮೆ ಅವು ಅನಗತ್ಯ ಪರಿಣಾಮಗಳನ್ನು (ಅಡ್ಡಪರಿಣಾಮಗಳು) ಉಂಟು ಮಾಡಬಹುದು. ನಿಮ್ಮ ಮಗುವಿನ ದೇಹ ಔಷಧಿಗೆ ಹೊಂದಿಕೊಂಡಂತೆ ಇವು ಕಡಿಮೆಯಾಗುತ್ತವೆ. ಎರಡು ವಾರಗಳ ನಂತರವೂ ಸಮಸ್ಯೆ ಇದ್ದರೆ ಅಥವಾ ನಿಮಗೆ ಆತಂಕ ಇದ್ದರೆ ವೈದ್ಯರನ್ನ ಸಂಪರ್ಕಿಸಿ.

  • ನಿಮ್ಮ ಮಗುವಿನ ವರ್ತನೆಯಲ್ಲಿ ಬದಲಾವಣೆ ಆಗಬಹುದು – ನಿದ್ರೆ ಹೆಚ್ಚಾಗಬಹುದು, ಮತ್ತು ಎಂದಿನ ಚುರುಕುತನ ಕಡಿಮೆಯಾಗಬಹುದು, ಸ್ಪಷ್ಟವಾಗಿ ಯೋಚನೆ ಮಾಡದಿರುವುದು ಅಥವಾ ವಿಷಯಗಳನ್ನುನೆನಪಿಡಲು ಸಾಧ್ಯವಾಗದಿರಬಹುದು.
  • ನಡುಕ ಕಾಣಿಸಬಹುದು ಅಥವಾ ಅವರ ಸಮನ್ವಯದ ಮೇಲೆ ಪರಿಣಾಮದ ಬೀರಬಹುದು, ಗೊಂದಲಕ್ಕೀಡಾಗಬಹುದು.
  • ಮಕ್ಕಳ ಮನಸ್ಥಿತಿಯಲ್ಲಿ ಬದಲಾವಣೆ ಆಗಬಹುದು. ಅತಿಯಾದ ಕೋಪ ಅಥವಾ ಅತಿಯಾದ ಉತ್ಸಾಹ ತೋರಿಸಬಹುದು. (ಎಂದಿಗಿಂತ ಅತಿಯಾದ ಚಟುವಟಿಕೆ ಮತ್ತು ವಿಶ್ರಾಂತಿ ತೆಗೆದುಕೊಳ್ಳಲು ಕಷ್ಟಪಡುವುದು)
  • ಮಗುವಿನ ಹಸಿವು ಕಡಿಮೆಯಾಗಬಹುದು. ವಾಕರಿಕೆ, ವಾಂತಿ, ಹೊಟ್ಟೆ ನೋವು ಅಥವಾ ಭೇದಿಯಾಗಬಹುದು.
  • ಮಗುವಿಗೆ ತಲೆ ನೋವು ಅಥವಾ ತಲೆಸುತ್ತುವಿಕೆ ಕಾಣಿಸಿಕೊಳ್ಳಬಹುದು.
  • ದದ್ದುಗಳು ಕಾಣಿಸಿಕೊಳ್ಳಬಹುದು
  • ಲೈವಿಟಾರೆಸಿಟಮ್ ಸೇವನೆಯು ಖಿನ್ನತೆ ಅಥವಾ ಮನಸ್ಥಿತಿ ಬದಲಾವಣೆಗೆ ಕಾರಣವಾಗಬಹುದು. ಈಗಾಗಲೇ ಈ ಸಮಸ್ಯೆ ಹೊಂದಿರುವ ಜನರಲ್ಲಿ ಈ ಅಪಾಯದ ಸಾಧ್ಯತೆ ಹೆಚ್ಚು. ಆದರೆ, ಸಾಮಾನ್ಯವಾಗಿ ಮಕ್ಕಳಲ್ಲಿ ಈ ಪ್ರಮಾಣ ಕಡಿಮೆ.

ನಿಮ್ಮ ಮಗುವಿಗೆ ಮೂತ್ರಪಿಂಡ ಕಾಯಿಲೆ ಅಥವಾ ವೈಫಲ್ಯ ಇದ್ದರೆ, ದಯವಿಟ್ಟು ವೈದ್ಯರಿಗೆ ತಿಳಿಸಿ. ಏಕೆಂದರೆ, ಅಂತಹ ಸಂದರ್ಭಗಳಲ್ಲಿ ಈ ಔಷಧಿಯ ಬಳಕೆ ಮತ್ತು ಡೋಸ್ ಬಳಕೆಯನ್ನು ಮರುಪರಿಗಣಿಸಬೇಕಾಗುತ್ತದೆ

ನಿಮ್ಮ ಮಗುವಿಗೆ ದೇಹದಲ್ಲಿ ದದ್ದುಗಳು ಉಂಟಾದರೆ, ಔಷಧಿ ನೀಡುವುದನ್ನು ನಿಲ್ಲಿಸಿ ಮತ್ತು ತಕ್ಷಣ ವೈದ್ಯರಿಂದ ಸಲಹೆ ಪಡೆಯಿರಿ.

ಕೆಲವೊಮ್ಮೆ, ಈ ಮೇಲೆ ಪಟ್ಟಿ ಮಾಡಿದ ಅಡ್ಡಪರಿಣಾಮಗಳನ್ನು ಹೊರತುಪಡಿಸಿ ಇತರೆ ಅಡ್ಡಪರಿಣಾಮಗಳು ಸಹ ಉಂಟಾಗಬಹುದು. ಅಂತಹ ಅಸಾಮಾನ್ಯವಾದುದು ನಿಮ್ಮ ಗಮನಕ್ಕೆ ಬಂದರೆ ಮತ್ತು ಈ ಕುರಿತು ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ,/ ಆತಂಕವಿದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಲೈವಿಟಾರೆಸಿಟಮ್ ನೀಡುವ ಸಮಯದಲ್ಲಿ ಇತರೆ ಸಾಮಾನ್ಯ ಔಷಧಿಗಳನ್ನು ನೀಡಬಹುದೇ?

  • ನೀವು ಮಗುವಿಗೆ ಪ್ಯಾರಸಿಟಮಾಲ್ ಅಥವಾ ಐಬುಪ್ರೊಫೇನ್ ಔಷಧಿಗಳನ್ನು ನೀಡಬಹುದು. ಆದರೆ, ಪ್ರತಿಜೀವಕ ಅಂಶಗಳನ್ನೊಳಗೊಂಡ ಔಷಧಿ ಮತ್ತು ಮೆಡಿಕಲ್ ಸ್ಟೋರ್ ನಲ್ಲಿ ಕೊಂಡ ಇತರೆ ಔಷಧಿಗಳನ್ನು ಮಗುವಿಗೆ ನೀಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

  • ನಿಮ್ಮ ಮಗುವಿಗೆ ಬೇರೆ ಔಷಧಿಗಳನ್ನು ನೀಡುವ ಮೊದಲು ನಿಮ್ಮ ವೈದ್ಯರನ್ನೊಮ್ಮೆ ಸಂಪರ್ಕಿಸಿ. ಅದು ಗಿಡಮೂಲಿಕೆ ಅಥವಾ ಪೂರಕ ಔಷಧಿಗಳಾಗಿದ್ದರೂ ಸಹ ವೈದ್ಯರ ಸಲಹೆ ಇಲ್ಲದೆ ಮುಂದುವರೆಯಬೇಡಿ.
  • ಅಪಸ್ಮಾರಕ್ಕೆ ಚಿಕಿತ್ಸೆ ನೀಡಲು ಬಳಸುವ ಇತರ ಕೆಲವು ಔಷಧಿಗಳು ಲೆವಿಟೆರಾಸಿಟಮ್ ನಷ್ಟೇ ಉತ್ತಮವಾಗಿ ಕೆಲಸ ಮಾಡಬಹುದು ಅಥವಾ ಅಡ್ಡಪರಿಣಾಮಗಳಿಗೂ ಕಾರಣವಾಗಬಹುದು. ಹಾಗಾಗಿ, ಇತರೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ವೈದ್ಯರ ಗಮನಕ್ಕೆ ತನ್ನಿ. ಅಡ್ಡಪರಿಣಾಮಗಳ ಬಗ್ಗೆ ನಿಮಗೆ ಆತಂಕವಿದ್ದಲ್ಲಿ ಅಥವಾ ನಿಮ್ಮ ಮಗುವಿಗೆ ಹೆಚ್ಚು ಬಾರಿ ಫಿಟ್ಸ್ ಬರುತ್ತಿದ್ದಲ್ಲಿ, ವೈದ್ಯರನ್ನು ಸಂಪರ್ಕಿಸಿ. .

ಔಷಧಿಯನ್ನು ಎಲ್ಲಿ ಸಂರಕ್ಷಿಸಿ ಇಡಬೇಕು?

ಔಷಧಿಯನ್ನು

  • ಸೂರ್ಯನ ಕಿರಣ ಮತ್ತು ಉಷ್ಣತೆಯಿಂದ ದೂರವಿರುವಂತೆ ಕಬೋರ್ಡ್ ನಲ್ಲಿ ಇಡಿ. ಇದನ್ನುಫ್ರಿಡ್ಜ್‌ನಲ್ಲಿ ಇಡುವ ಅವಶ್ಯಕತೆ ಇಲ್ಲ.
  • ಮಕ್ಕಳು ಔಷಧಿಯನ್ನು ನೋಡದಂತೆ ಅಥವಾ ಅವರ ಕೈಗೆಟುಕದಂತೆ ನೋಡಿಕೊಳ್ಳಿ.
  • ಖರೀದಿಸಿ ತಂದ ಬಾಕ್ಸ್ ನಲ್ಲಿಯೇ ಇಡಿ.

ಸಂಪೂರ್ಣ ಮಾಹಿತಿಗಾಗಿ ಉತ್ಪಾದಕರ ಮಾಹಿತಿ ಕೈಪಿಡಿಯನ್ನು ನೋಡಿ.

ಉಲ್ಲೇಖಗಳು:

  1. ಐಎಪಿ ಡ್ರಗ್ ಫಾರ್ಮುಲರಿ ವೆಬ್ ಅಪ್‌ಡೇಟ್ 2020 (3) ಆವೃತ್ತಿ 58, https://www.iapdrugformulary.com/Home
  2. ಗ್ರಾಹಕ ಔಷಧಿಗಳ ಮಾಹಿತಿ (ಸಿಎಮ್ಐ), https://www.tga.gov.au/consumer-medicines-information-cmi
  3. ಬ್ರಿಟಿಷ್ ಮಕ್ಕಳ ರಾಷ್ಟ್ರೀಯ ಫಾರ್ಮುಲರಿ (ಬಿಎನ್‌ಎಫ್‌ಸಿ)
  4. ಅಮೆರಿಕಾನ್ ಆಹಾರ ಮತ್ತು ಔಷಧಿಗಳ ಆಡಳಿತ, ಯುಎಸ್ಎ; https://www.fda.gov
Picture of Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore