Dr C P Ravikumar

ಎಲ್ ಕಾರ್ನೋಸಿನ್
ಪರಿಚಯ: ಎಲ್ ಕಾರ್ನೋಸಿನ್ ಎಂಬುದು ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಪ್ರೋಟೀನಾಗಿದ್ದು, ಮುಖ್ಯವಾಗಿ ಮೆದುಳು, ಹೃದಯ ಮತ್ತು ಸ್ನಾಯುಗಳು ಸಕ್ರಿಯವಾಗಿರುವಾಗ ಹೆಚ್ಚಾಗಿ ಕಂಡುಬರುತ್ತವೆ.
ಕಾರ್ನೋಸಿನ್ ಸಿಂಥೆಟೇಸ್ ಎಂಬುದು ಒಂದು ಕಿಣ್ವವಾಗಿದ್ದು ಇದು ಕಾರ್ನೋಸಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಕಾರ್ನೊಸಿನೇಸ್ ಎಂಬ ಕಿಣ್ವದಿಂದ ಅಮೈನೊ ಆಸಿಡ್ ಅಂಶಗಳಾಗಿ ವಿಭಜನೆಯಾಗಿರುತ್ತದೆ.

ಮೂಲಗಳು ಅ. ನೈಸರ್ಗಿಕ: ದೇಹದಲ್ಲಿ ಅಲಾನೈನ್ ಮತ್ತು ಹಿಸ್ಟಿಡೈನ್ ಎಂಬ ಎರಡು ಅಮೈನೊ ಆಮ್ಲ ಶೇಷಗಳ ಸಂಯೋಜನೆಯು ನೈಸರ್ಗಿಕವಾಗಿ ಡಿಪೆಪ್ಟೈಡ್ ರೂಪದಲ್ಲಿರುತ್ತದೆ. ಇದು ಗೋಮಾಂಸ ಮತ್ತು ಕೋಳಿ ಮಾಂಸದಲ್ಲೂ ಸಹ ಕಂಡುಬರುತ್ತದೆ. ಕಾರ್ನೊಸೈನ್‌ಗೆ ಯಾವುದೇ ಸಸ್ಯ-ಆಧಾರಿತ ಮೂಲಗಳಿಲ್ಲ. ಹಾಗಾಗಿ, ಸಸ್ಯಾಹಾರ ಸೇವನೆ ಮಾಡುವವರಲ್ಲಿ ಅಥವಾ ವೇಗನ್ (ಪ್ರಾಣಿಗಳ ದೇಹದಿಂದ ಉತ್ಪತ್ತಿಯಾಗುವ ಯಾವುದೇ ಉತ್ಪನ್ನಗಳನ್ನು ಬಳಸದ ವ್ಯಕ್ತಿ)ಗಳಲ್ಲಿ ಕಾರ್ನೋಸಿನ್ ಅಂಶವು ಕಡಿಮೆ ಮಟ್ಟದಲ್ಲಿರುತ್ತದೆ.

ಆ. ಪೂರಕಗಳು:
ಇದು ಪೂರಕ ಆಹಾರವಾಗಿಯೂ ಸಹ ಲಭ್ಯವಿದ್ದು, ಬಾಯಿಯ ಮೂಲಕ ಅಥವಾ ಚರ್ಮದ ಮೇಲೆ ಹಚ್ಚಿಕೊಳ್ಳಬಹುದು. ಕಾರ್ನೊಸೈನ್‌ನನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕೆಂಬುದು ವ್ಯಕ್ತಿಯ ವಯಸ್ಸು ಮತ್ತು ಆರೋಗ್ಯದಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ, ಏಕೆಂದರೆ “ನೈಸರ್ಗಿಕ ಉತ್ಪನ್ನಗಳನ್ನು” ಸೇವಿಸುವಾಗಲೂ ಸಹ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಾಗಾಗಿ, ವೈದ್ಯರೊಂದಿಗಿನ ಸಮಾಲೋಚನೆಯ ನಂತರವೇ ಇದನ್ನು ತೆಗೆದುಕೊಳ್ಳಬೇಕು.

ಎಲ್ ಕಾರ್ನೊಸೈನ್‌ ಸೇವನೆಯಿಂದಾಗುವ ಆರೋಗ್ಯದ ಲಾಭಗಳು
ಇದು ಜೀವಕೋಶಗಳು ಹಾಗೂ ಅಂಗಾಂಶಗಳನ್ನು ಸರಿಪಡಿಸಿ ಅವುಗಳ ಪುನರುತ್ಪಾದನೆಗೆ ಸಹಾಯ ಮಾಡುವ ಮೂಲಕ, ವಯಸ್ಸಾದಂತೆ ಸಹಜವಾಗಿ ಕಂಡು ಬರುವ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದು ವ್ಯಾಯಾಮ ವರ್ಧಕವಾಗಿಯೂ ಉತ್ತಮ ಫಲಿತಾಂಶ ನೀಡಿದ್ದು, ಕ್ರೀಡಾಪಟುಗಳು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಲು ಸ್ನಾಯುಗಳ ಬಲವರ್ಧನೆಗಾಗಿ ಇದನ್ನು ಬಳಸುತ್ತಾರೆ. ಇದು ಶಕ್ತಿ ಮತ್ತು ಕ್ಯಾಲ್ಸಿಯಂನ ಚಯಾಪಚಯ ಕ್ರಿಯೆಯ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ ಮತ್ತು ಅಸ್ಥಿಪಂಜರದ ಸ್ನಾಯುಗಳಲ್ಲಿ ಲ್ಯಾಕ್ಟಿಕ್ ಆಮ್ಲದ ಶೇಖರಣೆಯನ್ನು ಕಡಿಮೆ ಮಾಡುವ ಮೂಲಕ ಸ್ನಾಯುಗಳ ಆಯಾಸವನ್ನು ತಡೆಯುತ್ತದೆ.

ಆಟಿಸಂ, ಆಲ್ಜೈಮರ್, ಪಾರ್ಕಿನ್ಸೋನಿಸಮ್ ಅಥವಾ ಮೆದುಳಿನ ರಕ್ತಕೊರತೆಯಂತಹ ನರವೈಜ್ಞಾನಿಕ ಕಾಯಿಲೆಗಳ ರೋಗಲಕ್ಷಣಗಳನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಏಕೆಂದರೆ, ಇದು ಮೆದುಳು ಮತ್ತು ಸುತ್ತಮುತ್ತಲಿನ ಸೆರೆಬ್ರೊಸ್ಪೈನಲ್ ದ್ರವದಲ್ಲಿ ಉತ್ತಮ ಪ್ರಮಾಣದಲ್ಲಿದ್ದು, ರಕ್ತದ ಮಿದುಳಿನ ತಡೆಗೋಡೆ ದಾಟುವ ಸಾಮರ್ಥ್ಯವನ್ನು ಹೊಂದಿದೆ. ಇದು ಉರಿಯೂತದ ಚಿಹ್ನೆಗಳನ್ನು ಕಡಿಮೆ ಮಾಡುವ ಮೂಲಕ ನ್ಯೂರೋಪ್ರೊಟೆಕ್ಟಿವ್ ಕಾರ್ಯಗಳನ್ನು ಸೂಚಿಸುತ್ತದೆ. ಅದು ನ್ಯೂರೋಮಾಡ್ಯುಲೇಟರ್ ಮತ್ತು ಎಂಡೋಜೆನಸ್ ಆಂಟಿಆಕ್ಸಿಡೆಂಟ್ ಆಗಿರಬಹುದು. ದೃಷ್ಟಿ ಸಾಮರ್ಥ್ಯ ಸುಧಾರಿಸಲು, ಮಧುಮೇಹದಲ್ಲಿನ ತೊಡಕುಗಳನ್ನು ನಿವಾರಿಸಲು, ಮೂತ್ರಪಿಂಡದ ಕಾಯಿಲೆಯನ್ನು ತಡೆಗಟ್ಟಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಖಿನ್ನತೆಯನ್ನು ತಡೆಗಟ್ಟಲು ಇದು ಉತ್ತಮ ನೈಸರ್ಗಿಕ ಆಯ್ಕೆಯೆಂದು ಹೇಳಲಾಗುತ್ತದೆ. ಇದು, ರಕ್ತನಾಳಗಳಲ್ಲಿ ಅಪಧಮನಿಯ ದದ್ದುಗಳು ಉಂಟಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.

ದೇಹದಲ್ಲಿ ಎಲ್ ಕಾರ್ನೊಸೈನ್‌ ನ ಹೆಚ್ಚಳದಿಂದ ಉಂಟಾಗುವ ಪರಿಣಾಮಗಳು
ಕಾರ್ನೋಸಿನೇಸ್ ಕಿಣ್ವದ ಕೊರತೆಯು (ಇದು ಕಾರ್ನೊಸೈನ್‌ನ ವಿಘಟನೆ ಮತ್ತು ಚಯಾಪಚಯಕ್ಕೆ ಸಹಾಯ ಮಾಡುತ್ತದೆ) ರಕ್ತದಲ್ಲಿ ಕಾರ್ನೊಸೈನ್‌ನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದೊಂದು ಅಪರೂಪದ ಆನುವಂಶಿಕ ಸ್ಥಿತಿಯಾಗಿದೆ (ಇದರರ್ಥ, ಯಾವುದೇ ನ್ಯೂನತೆಯು ಪೋಷಕರಿಂದ ಆನುವಂಶಿಕವಾಗಿ ಪಡೆದ ಒಂದು ದೋಷಯುಕ್ತ ವಂಶವಾಹಿ (ಜೀನ್)ಯಿಂದ ಉಂಟಾದ ಸ್ಥಿತಿ) ಈ ನ್ಯೂನತೆಯು ವ್ಯಕ್ತಿಯ ಬಾಲ್ಯವಸ್ಥೆಯಲ್ಲಿ ಹೈಪೊಟೋನಿಯಾ (ಅಥವಾ ಸ್ನಾಯು ದೌರ್ಬಲ್ಯ), ಸಂವೇದನಾ ನರರೋಗ, ಸೆಳೆತ ಅಥವಾ ನಡುಕ, ನಿಧಾನಗತಿಯ ಬೆಳವಣಿಗೆ ಮತ್ತು ಬೌದ್ಧಿಕ ಅಸಾಮರ್ಥ್ಯಕ್ಕೆ ಕಾರಣವಾಗಬಹುದು.
ಸಾಮಾನ್ಯವಾಗಿ, ಕಾರ್ನೋಸಿನೀಮಿಯಾ ದೇಹದಲ್ಲಿ ಹೆಚ್ಚಿನ ಮಟ್ಟದಲ್ಲಿದೆಯೇ ಎಂಬುದನ್ನು ರಕ್ತ ಮತ್ತು ಮೂತ್ರದಲ್ಲಿ ಹೆಚ್ಚಿನ ಮಟ್ಟದ ಕಾರ್ನೋಸೈನ್ ನ ಪತ್ತೆಹಚ್ಚುವಿಕೆ ಹಾಗೂ ಕಡಿಮೆ ಮಟ್ಟದ ಕಾರ್ನೋಸಿನೇಸ್ ಕಿಣ್ವದ ಉಪಸ್ಥಿತಿಯ ಮೂಲಕ ಕಂಡು ಹಿಡಿಯಲಾಗುತ್ತದೆ. ಮಾಂಸಾಹಾರದಲ್ಲಿ ಕಾರ್ನೋಸಿನೀಮಿಯಾ ಅಂಶವು ಹೆಚ್ಚಿನ ಮಟ್ಟದಲ್ಲಿದ್ದು, ಅದು ವ್ಯಕ್ತಿಯ ಸಹಜ ಕಾರ್ನೋಸಿನೀಮಿಯಾ ಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ, ವ್ಯಕ್ತಿಯ ಆಹಾರಕ್ರಮದಲ್ಲಿ ಮಾಂಸಾಹಾರವಿದ್ದಲ್ಲಿ, ಮಾಂಸಾಹಾರ ಸೇವಿಸದ ದಿನಗಳಲ್ಲಿನ ಪರೀಕ್ಷೆಯನ್ನು ಮಾಡಲಾಗುತ್ತದೆ. ರೋಗಿಗಳು ಮೆದುಳಿನಲ್ಲಿ ಅಸಹಜ ಇಇಜಿ ಚಟುವಟಿಕೆಯು ಸಹ ತೋರಬಹುದು.
ರೋಗಲಕ್ಷಣಗಳಿಗೆ ಚಿಕಿತ್ಸೆ: ನೈದಾನಿಕ ನರವಿಜ್ಞಾನಿಗಳ ಮಾರ್ಗದರ್ಶನ, ಸಸ್ಯಾಹಾರ ಪಥ್ಯ, ಮತ್ತು ಯಾವುದೇ ಇತರೆ ಔಷಧಿಗಳಿಲ್ಲ

ಕಾರ್ನೊಸೈನ್‌ ಔಷಧಿಯನ್ನು ಎಚ್ಚರಿಕೆಯಿಂದ ಬಳಸಬೇಕಾದ ಸಂದರ್ಭಗಳು
1. ಅಧಿಕ ರಕ್ತದೊತ್ತಡದ ಔಷಧಿಗಳೊಂದಿಗೆ ಎಲ್ ಕಾರ್ನೋಸಿನ್ ಅನ್ನು ತೆಗೆದುಕೊಂಡಾಗ, ಪೂರಕಗಳು ರಕ್ತದೊತ್ತಡವನ್ನು ಹಾನಿಕಾರಕ ಕಡಿಮೆ ಮಟ್ಟಕ್ಕೆ ಇಳಿಸಬಹುದು. ಹಾಗಾಗಿ, ವೈದ್ಯರ ಸಲಹೆಯ ನಂತರವೇ ಕಾರ್ನೋಸಿನ್ ಅನ್ನು ಸೇವಿಸುವುದು ಉತ್ತಮ.
2. ಗರ್ಭಾವಸ್ಥೆ ಮತ್ತು ಮಗುವಿಗೆ ಹಾಲೂಣಿಸುವ ಸಮಯದಲ್ಲಿ
ಎಚ್ಚರಿಕೆ: ಮೇಲಿನ ಮಾಹಿತಿಯು ಅರಿವು ಮತ್ತು ಶಿಕ್ಷಣದ ಉದ್ದೇಶಗಳಿಗಾಗಿಯೇ ಹೊರತು ಯಾವುದೇ ಸ್ಥಿತಿಯ ರೋಗನಿರ್ಣಯ ಅಥವಾ ಚಿಕಿತ್ಸೆಗೆ ಬಳಸಲಾಗುವುದಿಲ್ಲ. ನಿಮ್ಮಲ್ಲಿ ಯಾವುದೇ ಸಂದೇಹ ಅಥವಾ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ವೈದ್ಯರನ್ನು ಭೇಟಿ ಮಾಡಿ.

ಉಲ್ಲೇಖಗಳು
1. https://rarediseases.org/rare-diseases/carnosinemia/
2. https://www.ncbi.nlm.nih.gov/pmc/articles/PMC6627134/
Picture of Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore