Site icon Dr C P Ravikumar

ಡಾಕ್ಟರ್ ಶಾಪಿಂಗ್

Doctor
ಡಾಕ್ಟರ್ ಶಾಪಿಂಗ್
ಇತ್ತೀಚಿನ ದಿನಗಳಲ್ಲಿ ರೋಗಿಗಳು ಏಕಪ್ರಕಾರದ/ ಕೇವಲ ಒಂದೇ ಆರೋಗ್ಯ ಸಮಸ್ಯೆಯ ಸಮಾಲೋಚನೆಗಾಗಿ ಅನೇಕ ವೈದ್ಯರ ಬಳಿ ಹೋಗುವ ಪ್ರವೃತ್ತಿ ಹೆಚ್ಚಾಗುತ್ತಿದೆ. ರೋಗಿಗಳ ಈ ನಡೆಯನ್ನು ವಿವರಿಸಲು ಬಳಸಲಾಗುತ್ತಿರುವ ಪದವೆಂದರೆ “ಡಾಕ್ಟರ್ ಶಾಪಿಂಗ್”. ಈ ಪ್ರವೃತ್ತಿಯು ಆರೋಗ್ಯ ಸೇವೆ ಒದಗಿಸುವವರು ಮತ್ತು ರೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ.

ರೋಗಿಗಳು ಈ ಡಾಕ್ಟರ‍್ ಶಾಪಿಂಗ್‌ಗೆ ನೀಡಿರುವ ಕಾರಣಗಳು ವೈವಿಧ್ಯಮಯವಾಗಿದ್ದು, ಅವು ಹೀಗಿವೆ:

ವೈದ್ಯಕೀಯ ಪ್ರವಾಸೋದ್ಯಮ ಸೌಲಭ್ಯಗಳ ಲಭ್ಯತೆ ಮತ್ತು ಪ್ರಯಾಣದ ಸ್ಥಳಗಳಲ್ಲಿ, ಜನರಿಗೆ ಅನುಕೂಲವಾಗುವಂತೆ ಕಂಪನಿಗಳು ಒದಗಿಸುವ ವಿಶೇಷ ತಜ್ಞರು ಮತ್ತು ವೈದ್ಯರ ಸಮಾಲೋಚನೆ
• ಬೇರೆಡೆಗಿಂತ ಉತ್ತಮ ಮೌಲ್ಯದಲ್ಲಿ ಸಮಾಲೋಚನೆ ಅಥವಾ ಚಿಕಿತ್ಸೆಯ ನಿರೀಕ್ಷೆ
• ಕ್ಲಿನಿಕ್, ಆಸ್ಪತ್ರೆ ಅಥವಾ ಚಿಕಿತ್ಸೆಯಲ್ಲಿ ಹಿಂದಿನ ವೈದ್ಯಕೀಯ ತಂಡದೊಂದಿಗೆ ಕೆಟ್ಟ ಅನುಭವವಾಗಿದ್ದಲ್ಲಿ ಹೊಸ ವೈದ್ಯರ ಹುಡುಕಾಟ
• ಈ ಹಿಂದೆ ಚಿಕಿತ್ಸೆ ಪಡೆದ ವೈದ್ಯರ ಪರಿಣಿತಿಯ ಅಡ್ಡಪರಿಶೀಲನೆ
• ತಮ್ಮ ಆಯ್ಕೆಯನ್ನು ಸಮ್ಮತಿಸುವ ವೈದ್ಯರನ್ನು ಹುಡುಕುವ ಆಶಯದೊಂದಿಗೆ ರೋಗಿಗೆ ಸೂಕ್ತವಾದ ಪರ್ಯಾಯ ಚಿಕಿತ್ಸೆಯ ಹುಡುಕಾಟ
• ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ಮೇಲೆ ಸಾಮಾನ್ಯವಾಗಿರುವ ಅಂತರ್ಗತ ಅಪನಂಬಿಕೆ
• ಅಂತರ್ಜಾಲದ ಬೆಳವಣಿಗೆಯಿಂದ ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧಗೊಂಡಿರುವ “ಡಾ. ಗೂಗಲ್” ನಲ್ಲಿ ಪರಿಶೀಲಿಸದ ವೈದ್ಯಕೀಯ ಮಾಹಿತಿಯನ್ನು ನಂಬುವ ಪ್ರವೃತ್ತಿ. (ಇದು ವೃತ್ತಿಪರರ ಆರೋಗ್ಯ ನೀಡುವ ಸಲಹೆಯ ಬಗ್ಗೆ ಸಂಶಯ ಮೂಡಿಸುತ್ತದೆ.)
• ಹೈಪೋಕಾಂಡ್ರಿಯಕ್ ನಡವಳಿಕೆ: ಈ ಸ್ಥಿತಿಯಲ್ಲಿ ರೋಗಿಗಳು ತಾವು ನಿರಂತರವಾಗಿ ಅನೇಕ ಆರೋಗ್ಯ ಸಮಸ್ಯೆಗಳು ಅಥವಾ ಕಾಯಿಲೆಗಳಿಂದ ಬಳಲುತ್ತಿದ್ದೇವೆ ಎಂದು ನಂಬುವುದರಿಂದ ಅದರ ಪರಿಹಾರಕ್ಕಾಗಿ ಹುಡುಕಾಟ

ರೋಗಿಗಳು ತಮ್ಮ ತಜ್ಞರಿಂದ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯಲು ಮತ್ತು ಆರೋಗ್ಯ ಪರಿಸ್ಥಿತಿಗಳ ಬಗ್ಗೆ ಎರಡನೆಯ ಅಭಿಪ್ರಾಯವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೇನೋ ಹೌದು. ಆದರೆ, ಕೇವಲ ಒಂದೇ ಆರೋಗ್ಯಸ್ಥಿತಿಗೆ ಅನೇಕ ಅಭಿಪ್ರಾಯಗಳನ್ನು ಹುಡುಕುವ ಉದ್ದೇಶದಿಂದ ಈ “ಡಾಕ್ಟರ‍್ ಶಾಪಿಂಗ್” ಮಾಡಲಾಗುತ್ತಿದೆ ಎಂಬುದು ಕಂಡುಬಂದಿದೆ. ದಿನಕಳೆದಂತೆ ಇದು ರೋಗಿಗೆ, ಅವನ ಆರೋಗ್ಯಕ್ಕೆ ಮತ್ತು ವೈದ್ಯ-ರೋಗಿಯ ಸಂಬಂಧಕ್ಕೆ ಪ್ರತಿರೋಧಕವಾಗಬಹುದು.

’ಡಾಕ್ಟರ‍್ ಶಾಪಿಂಗ್’ ನ ಪರಿಣಾಮಗಳು ಹೀಗಿರಬಹುದು:
1. ರೋಗಿಯು, ಉದ್ದೇಶಪೂರ್ವಕವಾಗಿ ಅಥವಾ ಅಜಾಗರೂಕತೆಯಿಂದ ತನ್ನ ಆರೋಗ್ಯ ಸ್ಥಿತಿಗಳ ಕುರಿತು ವೈದ್ಯರಿಗೆ ನೀಡುವ ಅಸಮಂಜಸ, ಅರೆ ಮತ್ತು ವಿಶ್ವಾಸಾರ್ಹವಲ್ಲದ ವೈದ್ಯಕೀಯ ಮಾಹಿತಿಯು ತಪ್ಪಾದ ರೋಗನಿರ್ಣಯಕ್ಕೆ ಕಾರಣವಾಗಬಹುದು ಮತ್ತು ಇಬ್ಬರ ನಡುವೆ ಅಪನಂಬಿಕೆಯನ್ನು ಶಾಶ್ವತಗೊಳಿಸಿಬಿಡಬಹುದು.
2. ಆರೋಗ್ಯ ಸ್ಥಿತಿಯು ಉತ್ತಮಗೊಳ್ಳಲೆಂದು ಬೇರೆ ಬೇರೆ ವೈದ್ಯರು ಸೂಚಿಸಿದ ಔಷಧಿಗಳು/ ಇತರೆ ಸಂಪನ್ಮೂಲಗಳು ವ್ಯರ್ಥವಾಗುವುದಲ್ಲದೆ, ಅನಗತ್ಯ ವೈದ್ಯಕೀಯ ವೆಚ್ಚಕ್ಕೆ ಕಾರಣವಾಗಬಹುದು.
3. ಆರೋಗ್ಯ ಪರಿಸ್ಥಿತಿಗಳ ಅಪೂರ್ಣ ನಿರ್ವಹಣೆ, ಅಥವಾ ಚಿಕಿತ್ಸೆಯನ್ನು ಅರ್ಧದಲ್ಲೇ ನಿಲ್ಲಿಸುವುದು ರೋಗಿಯ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.
4. ಪಾಲಿಫಾರ್ಮಸಿ: ವೈದ್ಯರು ಸೂಚಿಸಿದ ಔಷಧಿಗಳು (ಪ್ರಿಸ್ಕ್ರಿಪ್ಷನ್ ಆಧಾರಿತ) ಮತ್ತು ಮೆಡಿಕಲ್ ಸ್ಟೋರ‍್ ಗಳಲ್ಲಿ ಕೊಂಡ/ಪರ್ಯಾಯ ಔಷಧಿಗಳು, ಪೂರಕಗಳು ಸೇರಿದಂತೆ ಸಾಮಾನ್ಯವಾಗಿ ಐದು ಅಥವಾ ಹೆಚ್ಚಿನ ಔಷಧಿಗಳ ಏಕಕಾಲಿಕ ಬಳಕೆಯನ್ನು ಹೀಗೆನ್ನಬಹುದು. ಇದು ದೇಹಕ್ಕೆ ಮಿತಿಮೀರಿದ ಸೇವೆನೆಯಾಗುವುದಲ್ಲದೆ, ಅಂಗಾಗಳಲ್ಲಿ ಔಷಧಿಗಳು ಶೇಖರಣೆಯಾಗುವ ಮೂಲಕ ದೇಹದ ಮೇಲೆ ಒತ್ತಡವನ್ನುಂಟು ಮಾಡುತ್ತದೆ, ಇದು ಶರೀರದಲ್ಲಿ ಪ್ರತಿಕೂಲ ಮತ್ತು ಪ್ರತಿಕ್ರಿಯೆಗಳನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದ್ದು, ರೋಗಿಯ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.
5. ಪ್ರತಿಜೀವಕ ಔಷಧಿಗಳ ವಿವೇಚನೆರಹಿತ ಮತ್ತು ಅಪೂರ್ಣ ಬಳಕೆಯು ಬ್ಯಾಕ್ಟೀರಿಯಾದ ಪ್ರತಿಜೀವಕ ನಿರೋಧಕ ತಳಿಗಳ ಬೆಳವಣಿಗೆ ಮತ್ತು ಅಪಾಯಕಾರಿ ಮತ್ತು ಸ್ಪಂದಿಸದ ಸೋಂಕುಗಳಿಗೆ ಕಾರಣವಾಗಬಹುದು.
6. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಾಗ, ವಿಶೇಷವಾಗಿ ಮಕ್ಕಳ ವಿಷಯದಲ್ಲಿ ಪೋಷಕರು, ತ್ವರಿತ ಮತ್ತು ಶಾಶ್ವತ ಉತ್ತರವನ್ನು ಕಂಡುಕೊಳ್ಳಲು ಬಯಸುತ್ತಾರೆ. ಇದರಿಂದಾಗಿ ಅವರರು ಯಾವುದೇ ಒಬ್ಬ ವೈದ್ಯರು ನೀಡುವ ಚಿಕಿತ್ಸೆಯ ಪಥ್ಯಕ್ರಮಗಳನ್ನು ಬಹಳ ಸಮಯದವರೆಗೆ ಅವಲಂಬಿಸಲು ಇಚ್ಛಿಸುವುದಿಲ್ಲ ಹಾಗಾಗಿ, ತಕ್ಷಣದ ಪರಿಹಾರಕ್ಕಾಗಿ ಮತ್ತು ಕೈಗಳ ಬದಲಾವಣೆಯು ಬಹುಶಃ ವ್ಯತ್ಯಾಸವನ್ನುಂಟು ಮಾಡಬಹುದು ಎಂಬ ನಂಬಿಕೆಯಿಂದ ಮತ್ತೊಬ್ಬ ವೈದ್ಯರನ್ನು ಸಂಪರ್ಕಿಸುತ್ತಾರೆ. ಹೀಗಾಗಿ, ಈ ಔಷಧಗಳು ಅಥವಾ ಪಥ್ಯಕ್ರಮದ ವ್ಯತ್ಯಾಸಗಳಿಂದ ಒಟ್ಟಾರೆ ಉದ್ದೇಶಕ್ಕೆ ತೊಂದರೆಯಾಗಿ ಪ್ರಗತಿ ನಿಧಾನವಾಗಬಹುದು. ’ಪವಾಡದ ರೀತಿಯ ಪರಿಹಾರ”ದ ಹುಡುಕಾಟವು ಒಬ್ಬ ವೈದ್ಯರಿಂದ ಇನ್ನೊಬ್ಬ ವೈದ್ಯರತ್ತ ಸಾಗಲು ಕಾರಣವಾಗುತ್ತದೆ, ಇದು ಅಪೂರ್ಣ ಚಿಕಿತ್ಸೆಗಳಿಗೆ ಕಾರಣವಾಗುತ್ತದಲ್ಲದೆ ಕೆಲವೊಮ್ಮೆ ಆರೋಗ್ಯ ಸ್ಥಿತಿಯು ಮತ್ತಷ್ಟು ಹದಗೆಡಿಸುತ್ತದೆ.
ಈ ನಡೆ ಜಾಗತಿಕವಾಗಿ ಕಂಡುಬರುತ್ತಿದ್ದು, ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಸಲಾದ ಹಲವಾರು ಅಧ್ಯಯನಗಳು, ಮಾದಕವಸ್ತುಗಳ ದುರುಪಯೋಗ, ವಿಶೇಷವಾಗಿ ನೋವು ನಿವಾರಕಗಳಂತಹ ಔಷಧಿಗಳ ಸೇವೆನೆಯ ಸೂಚನೆಯಂತಹ ಆತಂಕಕಾರಿ ಪ್ರವೃತ್ತಿಯನ್ನು ತೋರಿಸಿವೆ. ’ಡಾಕ್ಟರ‍್ ಶಾಪಿಂಗ್’ ಪ್ರವೃತ್ತಿಯು ನೋವು ನಿವಾರಕಗಳಂತಹ ಔಷಧಿಗಳ ಸೇವನೆ, ಒಂದೇ ಆರೋಗ್ಯ ಸಮಸ್ಯೆಗೆ ಅನೇಕ ಔಷಧಿಗಳನ್ನು ಪಡೆಯುವ ಅವಕಾಶವನ್ನು ಒದಗಿಸಿಕೊಡುವುದರಿಂದ ಇದು ಮಾದಕವಸ್ತುಗಳ ಅವಲಂಬನೆ ಮತ್ತು ಅದರ ಚಟಕ್ಕೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕೆಲವೊಂದು ವ್ಯಕ್ತಿಗಳು ಅನಾರೋಗ್ಯಕ್ಕೆ ಒಳಗಾಗದಿದ್ದರೂ ಸಹ, ಉದ್ದೇಶಪೂರ್ವಕವಾಗಿ ತಮಗೆ ಅಥವಾ ಅವಲಂಬಿತ ಕುಟುಂಬದ ಸದಸ್ಯರಿಗೆ ಆರೋಗ್ಯ ಸಮಸ್ಯೆಯಿದೆಯೆಂದು ಭಾವಿಸುತ್ತಾರೆ. ಈ ರೀತಿ ಭಾವಿಸಿ ನಟಿಸುವುದು (ಲಕ್ಷಣಗಳು) ಮತ್ತು ಡಾಕ್ಟರ‍್ ಶಾಪಿಂಗ್ ವರ್ತನೆಯು ನ್ಯೂನತೆಯ ಸೂಚನೆಯಾಗಿದ್ದು, ಸಮಸ್ಯೆಯ ಗುರುತಿಸುವಿಕೆಯನ್ನು ತುಂಬಾ ಕಷ್ಟಕರವಾಗಿಸುತ್ತದೆ.
ಇದು ವೈದ್ಯರು-ರೋಗಿಗಳ ಸಂಬಂಧದಲ್ಲಿ ಅಂತರವನ್ನು ಹೆಚ್ಚಿಸುವುದರೊಂದಿಗೆ ವೈದ್ಯಕೀಯ ವೃತ್ತಿಪರರೊಂದಿಗಿನ ಅಪನಂಬಿಕೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಮಾತ್ರವಲ್ಲದೆ, ಈ ’ ಡಾಕ್ಟರ‍್ ಶಾಪಿಂಗ್’ ಎಂಬುದು ರೋಗಿಯ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ ಮತ್ತು ಅಪೂರ್ಣ ಚಿಕಿತ್ಸಾ ವಿಧಾನಗಳಿಂದ ಪರಿಸ್ಥಿತಿಗಳು ಮತ್ತಷ್ಟು ಹದಗೆಡುತ್ತವೆ.
Picture of Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore

Exit mobile version